Posted by: Veena on: June 3, 2008
ಒಂದೆಡೆ ಸಮುದ್ರ ತೀರ, ದಡದ ಮೇಲೆ ನೂರಾರು ನಕ್ಷತ್ರ ಮೀನು(star fish)ಗಳು ಸತ್ತು ಬಿದ್ದಿರುತ್ತವೆ. ಅಲ್ಲಿದ್ದ ಪುಟ್ಟ ಕಂದ ಅಮ್ಮನನ್ನು ಕುತೂಹಲದಿಂದ ಪ್ರಶ್ನಿಸಿದ.. ಆಗ ಅಮ್ಮ ಹೇಳಿದ ಮಾತು — “ಮಗು, ಸಮುದ್ರದ ಅಲೆಗಳ ರಭಸಕ್ಕೆ ಆ ಮೀನುಗಳೆಲ್ಲ ದಡಕ್ಕೆ ಬಂದು ಬಿದ್ದು, ಬಿಸಿಲಿನ ತಾಪಕ್ಕೆ ಸಾಯುತ್ತಿವೆ” . ಸ್ವಲ್ಪ ಹೊತ್ತಿನ ನಂತರ ಆ ಪುಟ್ಟ ಮಗು ಒಂದೊಂದು ಮೀನನ್ನು ಸಮುದ್ರಕ್ಕೆ ಎಸೆಯಲು ಶುರು ಮಾಡುತ್ತಾನೆ, ಅಲ್ಲಿದ್ದ ಜನರೆಲ್ಲ ಆ ಮಗುವಿನಿಂದ ಪ್ರೇರಿಪಿತಗೊಂಡು ಮೀನುಗಳನ್ನು ನೀರಿಗೆ ಎಸೆಯುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.
ಹಾಗೆ ಟಿ.ವಿ ಯಲ್ಲಿ ಒಂದು “Advertisement” ನೋಡಿದ ನೆನಪು.. ಆಗಷ್ಟೆ ಮಳೆ ಬಂದು ನಿಂತಿರುತ್ತದೆ, ದೊಡ್ಡದೊಂದು ಮರ ಉರುಳಿ ರಸ್ತೆಯ ಮಧ್ಯಭಾಗದಲ್ಲಿ ಬಿದ್ದಿರುತ್ತದೆ. ಎಲ್ಲ ಚಾಲಕರು(ಕಾರು, ಬೈಕು, ಇತ್ಯಾದಿ) ಸುಮ್ಮನೆ ಹಾರ್ನ್ ಮಾಡಿ ಸದ್ದು ಮಾಡುತ್ತ ಒಬ್ಬರನೊಬ್ಬರು ನೋಡುತ್ತ ಮನಸ್ಸಿನಲ್ಲೆ ಸರ್ಕಾರವನ್ನು ಶಪಿಸುತ್ತಾ ನಿಂತಿರುತ್ತಾರೆ. ಆಗೊಬ್ಬ ಪುಟ್ಟ ಬಾಲಕ ಮುಂದೆ ಬಂದು ಆ ಮರವನ್ನು ತಳ್ಳುವ ಪ್ರಯತ್ನ ಮಾಡುತ್ತಾನೆ, ಅಲ್ಲಿದ್ದ ಎಲ್ಲ ಚಾಲಕರು ಬಂದು ಆ ಮರದ ದಿಮ್ಮಿಯನ್ನು ಪಕ್ಕಕ್ಕೆ ಸರಿಸಲು ಕೈ ಜೋಡಿಸುತ್ತಾರೆ.
ಮೇಲೆರಡು ಸನ್ನಿವೇಶಗಳಲ್ಲಿ ಎರಡು ಅಂಶವನ್ನು ಗಮನಿಸಬೇಕಾಗುತ್ತದೆ.
೧. ಒಂದು ಪುಟ್ಟ ಮಗುವಿಗೆ ಅನ್ನಿಸಿದ್ದು ದೊಡ್ಡವರಿಗೇಕೆ ಹೊಳೆಯುವುದಿಲ್ಲ.
೨. ಮುಕ್ಕಾಲು ಪಾಲು, ನಮ್ಮೊಬ್ಬರ ಕೈಲಿ ಎನಾದೀತು ಎಂಬ ಕಾರಣದಿಂದ ಯಾವ ಕೆಲಸಕ್ಕು ಕೈ ಹಾಕಲು ಮುಂದಾಗುವುದಿಲ್ಲ ನಾವು(ದೊಡ್ಡವರು).
ಇದಕ್ಕೆ ಉದಾಹರಣೆಯಾಗಿ ಬೇಕಾದಷ್ಟು ಸನ್ನಿವೇಶಗಳನ್ನು ವಿವರಿಸುತ್ತ ಹೋಗಬಹುದು. ರೈಲಿನಲ್ಲಿ ಕಡಲೆಕಾಯಿ ತಿಂದು ಅದರ ಸಿಪ್ಪೆಯನ್ನು ಅಲ್ಲೆ ಬಿಸಾಡುವವರು ಎಷ್ಟೋ ಜನ. ನಾವೊಬ್ಬರಾದರು ಸಿಪ್ಪೆಯನ್ನು ಒಂದು ಪೇಪರಿನಲ್ಲಿ ಹಾಕಿದಾಗ (ಅದನ್ನು ಕಸದ ಬುಟ್ಟಿಯಲ್ಲಿ ಹಾಕಲು), ಪಕ್ಕದಲ್ಲಿರುವವರು ’ಓಹೋ ನೀನೊಬ್ಬಳು ಈ ತರ ಮಾಡಿದ್ರೆ ರೈಲು ಗಲೀಜು ಆಗೊಲ್ವ’? ಅನ್ನೋದು ಬಹಳ ಅನುಭವಕ್ಕೆ ಬಂದಿರುವ ಸುದ್ದಿ.. ಆ ಸಣ್ಣ ಪ್ರಯತ್ನ ಒಳ್ಳೆಯ ಕೆಲಸಕ್ಕೆ ನಾಂದಿ ಅನ್ನುವ ಸಣ್ಣ ಸತ್ಯವನ್ನು ಮರೆತು ಮಾತಡಿಬಿಡುತ್ತೇವೆ.
ಅದು ಹಾಗಿರಲಿ, ಜೂನ್ ೫(5)ರಂದು ವಿಶ್ವ ಪರಿಸರ ದಿನ.. ನಾವೆಲ್ಲರು ಒಂದೊಂದು ಗಿಡ ನೆಟ್ಟರೆ ಹೇಗೆ…? ಮೈಸೂರಿನಲ್ಲಿ ನೀವೇನಾದರು ಇದ್ದರೆ ಖಂಡಿತ ನಮ್ಮ ಮನೆಯ ಮುಂಭಾಗದಲ್ಲಿರುವ ಪಾರ್ಕಿಗೆ ಬನ್ನಿ.. ಅಲ್ಲೊಂದು ಗಿಡ ನೆಡಿ.. ಅಲ್ಲಿಯೆ ಬರಬೇಕೆಂದಲ್ಲ ನಿಮ್ಮ ಮನೆಯ ಅಂಗಳದಲ್ಲೋ ಅಥವಾ ಕಛೇರಿಯಲ್ಲೋ ಒಂದು ಗಿಡ ನೆಡಿ…
ಇನ್ನಷ್ಟು ವರ್ಷವಾದ ಬಳಿಕ ನಮ್ಮ ಮುಂದಿನ ಪೀಳಿಗೆ ಆ ಮರದ ಗಾಳಿ ಸವಿಯಲಿ… ಹಾಗೇನಾದರು ಬಿಸಿಲಿದ್ದಲ್ಲಿ ಕೊಂಚ ಸಮಯ ಆ ಮರದಡಿಯಲ್ಲಿ ನಿಂತು ಹೊರಡಲಿ….
–ವೀಣಾ ಶಿವಣ್ಣ.
ವೀಣಾರವರೇ,
ಬಹಳ ಒಳ್ಳೆಯ ವಿಷಯವನ್ನು ಮನಮುಟ್ಟುವಂತೆ ಬರೆದಿದ್ದೀರಿ. ಅದಕ್ಕೆ ನಿಮಗೆ ಬಹಳ ಧನ್ಯವಾದಗಳು. ನಿಮ್ಮ ಸಲಹೆಯಂತೆ ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ನೆಟ್ಟರೆ ನಮ್ಮ ಪರಿಸರವು ಸುಂದರವಾಗುವುದರಲ್ಲಿ ಸಂದೇಹವೇ ಇಲ್ಲ.
ಮುಂದೆಯೂ ಇಂಥಹ ವಿಷಯಗಳನ್ನು ಬರೆಯುತ್ತಿರಿ ಎಂದು ಕೋರುತ್ತೇನೆ
June 4, 2008 at 4:36 pm
Veena,
A very good post. Definetly if we ignore the nature, we all will die ( mankind) one day due to the excigencies.
The oil price hike is a boon in disguise – hope the rich class atleast use this fuel sparingly and cut down on pollution.
cheers
mohan!